ಶ್ರಾವಣ ಪೌರ್ಣಿಮೆ ದಿವಸ ಆಚರಿಸಲ್ಪಡುವ ಈ ಹಬ್ಬಕ್ಕೆ ಹೆಸರೇನೋ ಕೊಟ್ಟಿದಾರೆ ರಕ್ಷಾಬಂಧನ ಅಂತ. ಕೆಲವೊಬ್ಬರು ತಂಗಿ ತನ್ನ ಅಣ್ಣನ ರಕ್ಷೆಗಾಗಿ ಅವನ ಕೈಗೆ ರಾಖಿ ಕಟ್ಟುತ್ತಾಳೆ ಅದರ ಜೊತೆಗೆ ನನ್ನನ್ನು ಕೆಟ್ಟದ್ದರಿಂದ ರಕ್ಷಿಸು ಅಂತ ಕೇಳಿಕೊಳ್ಳುತ್ತಾಳೆ. ಆ ರಾಖಿ ಕಟ್ಟಿಕೊಂಡಾಕ್ಷಣದಿಂದ ತನ್ನ ತಂಗಿಗೆ ರಕ್ಷಣೆ ಕೊಡ್ತೀನಿ ಅಂತ ಸಂಕಲ್ಪ ತೊಡ್ತಾನೆ ಅಣ್ಣ.
ನಾವು ಹಿಂದಿನಿಂದ ಕೇಳ್ತಾ ಬಂದಿರೋ ಪೌರಾಣಿಕ ಕಥೆಗಳನ್ನೇ ಮೆಲುಕು ಹಾಕಿದರೆ ಅಣ್ಣ ತಂಗಿಯ ಸಂಬಂಧ ಅನ್ನೋದು ಹೇಗಿರತ್ತೆ ಅನ್ನೋದಕ್ಕೆ ತುಂಬಾ ಉದಾಹರಣೆಗಳು ಸಿಗತ್ತೆ.
ಮೊದಲನೇ ಉದಾಹರಣೆ ಸಿಗೋದೆ ಕೃಷ್ಣ -- ದ್ರೌಪದಿ. ಪುರಾಣಗಳ ಪ್ರಕಾರ ಸಂಕ್ರಾಂತಿಯ ದಿನದಂದು ಕೃಷ್ಣ ತನ್ನ ಬೆರಳನ್ನು ಕೊಯ್ಕೊತಾನೆ. ಆ ದಿನ ರುಕ್ಮಿಣಿ ತನ್ನ ದಾಸಿಯನ್ನ ಬ್ಯಾಂಡೇಜ್ ತಗೊಂಡ್ ಬರಕ್ಕೆ ಕಳಿಸ್ತಾಳೆ. ಸತ್ಯಭಾಮ ತಾನೇ ಬ್ಯಾಂಡೇಜ್ ತರೋದಕ್ಕೆ ಓಡ್ತಾಳೆ. ಇದನ್ನೆಲ್ಲಾ ನೋಡ್ತಾ ನಿಂತಿದ್ದ ದ್ರೌಪದಿ ತನ್ನ ಸೀರೆಯನ್ನೇ ಹರಿದು ಕೃಷ್ಣನಿಗೆ ಬ್ಯಾಂಡೇಜ್ ಕಟ್ಟುತ್ತಾಳೆ. ಈ ಕೆಲಸಕ್ಕಾಗಿ ಕೃಷ್ಣ ದ್ರೌಪದಿಗೆ ನಿನ್ನ ಅಣ್ಣನಾಗಿ ನಾನು ನಿನ್ನನ್ನು ಕಾಪಾಡ್ತೀನಿ ಅಂತ ಭಾಷೆ ಕೊಡ್ತಾನೆ. ಹಾಗೆಯೇ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುವಾಗ ತನ್ನ ಮಾಯಾ ಶಕ್ತಿಯಿಂದ ದ್ರೌಪದಿಯ ಮಾನ ಕಾಪಾಡುತ್ತಾನೆ.
ಮತ್ತೊಂದು ಐತಿಹಾಸಿಕ ಕಥೆಗಳನ್ನ ಮೆಲುಕು ಹಾಕ್ತ ಹೋದರೆ ನಮಗೆ ಸಿಗುವುದು ರಾಣಿ ಕರ್ಣವತಿ ಮತ್ತು ಹುಮಾಯೂನ್ ಕಥೆ. ಮೇವಾರದ ರಾಣಿಯಾಗಿದ್ದ ಕರ್ಣವತಿ ತನ್ನ ಪತಿ ರಾಣ ಸಂಗನ ಸಾವಿನ ನಂತರ ಮೇವಾರದ ಗದ್ದುಗೆ ಏರಿದ್ದಳು. ಆಕೆ ತನ್ನ ಹಿರೇ ಮಗನಾದ ವಿಕ್ರಮಾಜೀತನ ಹೆಸರಿನಲ್ಲಿ ತನ್ನ ಮೇವಾರದ ಜನರನ್ನ ನೋಡಿಕೊಳ್ಳುತ್ತಿದ್ದಳು. ಗುಜರಾತಿನ ಅರಸನಾಗಿದ್ದ ಬಹಾದೂರ್ ಶಾಹ್ ಮೇವಾರದ ಮೇಲೆ ಎರಡನೇ ಬಾರಿ ದಂಡೆತ್ತಿ ಬಂದಾಗ ರಾಣಿ ಕರ್ಣವತಿ ಉಳಿದ ಎಲ್ಲ ಅರಸರನ್ನು ಸಹಾಯಕ್ಕಾಗಿ ಕೋರಿದಳು. ಮೊದಮೊದಲು ಎಲ್ಲ ಅರಸರು ಸಹಾಯ ಮಾಡ್ತಿವಿ ಅಂತ ಹೇಳಿ ಕೊನೆಗೆ ಎಲ್ಲರು ಕೈ ಕೊಟ್ಟರು. ಆ ಸಂದರ್ಭದಲ್ಲಿ ರಾಣಿ ತನ್ನ ಪಾರಿವಾಳದ ಮೂಲಕ ಮೊಘಲ್ ರಾಜನಾಗಿದ್ದ ಹುಮಾಯೂನನಿಗೆ ಸಹಾಯ ಕೋರುತ್ತ ಒಂದು ಪತ್ರ ಬರೆದಳು. ಆ ಪತ್ರದ ಜೊತೆಗೆ ಒಂದು ರಾಖಿಯನ್ನು ಕಳಿಸಿದ್ದಳು.
ಈ ಪತ್ರ ಹುಮಾಯೂನನಿಗೆ ತಲುಪುವುದಕ್ಕೂ ಮೊದಲು ಮೊಘಲ್ ಸಾಮ್ರಾಟ ಮತ್ತೊಂದು ಯುಧ್ಧಕ್ಕೆ ತನ್ನ ಸೇನೆಯನ್ನ ಕಳಿಸಿದ್ದ. ಈ ಪತ್ರ ದೊರಕುತ್ತಲೇ ಆ ಸೇನೆಯನ್ನು ಮೇವಾರದ ಕಡೆಗೆ ಕಳುಹಿಸಿದ. ಈ ಸೇನೆ ಮೆವಾರಕ್ಕೆ ತಲುಪುವ ಮೊದಲೇ ರಜಪೂತರ ಸೇನೆ ಚಿತ್ತೂರಿನಲ್ಲಿ ಸೋಲನ್ನು ಒಪ್ಪಿಕೊಂಡಿತ್ತು. ಬಹಾದೂರ್ ಶಾಹ್ ಎದುರಿಗೆ ತನ್ನ ರಾಜ್ಯಕ್ಕಾಗಿ ಬೇಡುವುದಕ್ಕಿಂತ ಸಾವೇ ಲೇಸು ಎಂದು ರಾಣಿ ಕರ್ಣವತಿ ತನ್ನ ಪ್ರಾಣವನ್ನು ತಾನೇ ತೆಗೆದು ಕೊಂಡಿದ್ದಳು. ನಂತರ ಮೊಘಲ್ ಸೇನೆ ಬಹಾದೂರ್ ಶಾಹ್ ಒಡನೆ ಯುಧ್ಧವಾಡಿ ಮೇವಾರದ ಗದ್ದುಗೆಯನ್ನು ತಿರುಗಿ ವಿಕ್ರಮಾಜೀತನಿಗೆ ನೀಡಿದರು.
ಇದೇ ರೀತಿ ಯಮ ಹಾಗೂ ಯಮುನಾ, ಗಣಪತಿ ಮತ್ತು ಮಾನಸ, ಲಕ್ಷ್ಮಿ ಹಾಗೂ ಬಾಲಿ ಹೀಗೆ ಸಾವಿರಾರು ಕಥೆಗಳು ನಮ್ಮ ಮನಸ್ಸಿಗೆ ಬರುತ್ತವೆ. ಈ ತರಹದ ಸಂಸ್ಕೃತಿ ಇರುವಂಥ ನಾಡಿನಲ್ಲಿ ನಾವು ಹುಟ್ಟಿದ್ದು ನಮ್ಮ ಪುಣ್ಯ ಅಲ್ವ???
ಸುಮ್ಮನೆ ಒಬ್ಬ ಅಣ್ಣನಾಗಿ ರಾಖಿ ಕಟ್ಟಿಸಿಕೊಂಡು ತಂಗಿಗೆ ಉಡುಗೊರೆಯಾಗಿ ಏನನ್ನೋ ಕೊಟ್ಟರೆ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ರಾಖಿ ಹಬ್ಬದ ಹಿಂದಿನ ಭಾವನೆಗಳನ್ನ ಅರ್ಥ ಮಾಡಿಕೊಂಡು ನಾವು ಅದರಂತೆ ನಡೆದು ಕೊಂಡರೆ ಸಾಕು. ಈ ಅಣ್ಣ ತಂಗಿಯ ಸಂಬಂಧ ಹಿಂದಿನಂತೆಯೇ ಇರಲಿ. ಬಾಂಧವ್ಯತೆ ಎಲ್ಲರಲ್ಲೂ ಬೆಳಿಯಲಿ ಅಂತ ಆಶಿಸುತ್ತೇನೆ.
ಎಲ್ಲ ಅಣ್ಣ ತಮ್ಮಂದಿರಿಗು, ಅಕ್ಕ ತಂಗಿಯರಿಗೂ ರಕ್ಷಾಬಂಧನದ ಶುಭಾಶಯಗಳು