ಹಿಂದೂ ವಿವಾಹವು ಸುಮಾರು ೫೦೦೦
ವರ್ಷಗಳ, ಪ್ರಾಚೀನ, ವೈಧಿಕ ಪದ್ಧತಿಯ ಸಾಂಪ್ರದಾಯಿಕ
ಮದುವೆ. ಅನುಷ್ಠಾನದ ಪ್ರತಿಯೊಂದು ಹಂತವು ಅರ್ಥಗರ್ಭಿತ, ಪಾರಿವಾರಿಕ,
ಸಾಮಾಜಿಕ ಬದ್ಧತೆಯ ತತ್ವವುಳ್ಳ ಸಂಸ್ಕಾರಯುತ
ಜೀವನ ನಡೆಸಲು ಗಂಡು-ಹೆಣ್ಣನ್ನು
ಒಂದುಗೂಡಿಸಿ ಸಜ್ಜುಗೊಳಿಸುವ ಸಾಂಕೇತಿಕ ಆಚರಣೆ. ವಧೂ-ವರರ
ಜೀವ ಚೈತನ್ಯಗಳನ್ನು, ಎರಡು ಕುಟುಂಬಗಳನ್ನು, ಎರಡು
ಸಾಮಾಜಿಕ ಗುಂಪುಗಳನ್ನು ಮತ್ತು ಪ್ರದೇಶಗಳ ಬಾಂಧವ್ಯವನ್ನು
ಒಟ್ಟುಗೂಡಿಸಿ, ಗಟ್ಟಿಗೊಳಿಸುವುದು. ಈ ವಿಧಿ ವಿಧಾನಗಳ
ಅನುಷ್ಠಾನವನ್ನು ವೆದಭಾಷೆ ಸಂಸ್ಕೃತದಲ್ಲಿ ಮಾಡಲಾಗುತ್ತದೆ.
ವಿವಾಹವೆಂದರೆ ಪರಸ್ಪರ ಆಧಾರವಾಗಿರುವ ಪವಿತ್ರ
ಬಂಧನಾಚರಣೆ. ವೈವಾಹಿಕ ಜೀವನ ಪರ್ಯಂತ
ಒಬ್ಬರನ್ನೊಬ್ಬರು ಆಧರಿಸಿ ಧರ್ಮದ ಜೀವನ
ನಡೆಸುವುದು.
ಇವುಗಳ ಮಧ್ಯೆ ನಮ್ಮ ಹಿಂದೂ
ವಿವಾಹ ಮಹೋತ್ಸವದ ಪ್ರಸಂಗಗಳ ಬಗ್ಗೆ ಸ್ವಲ್ಪ ಮಾಹಿತಿ
ಕೊಡುವುದು ನನ್ನ ಧರ್ಮ.
ವರ ಪೂಜೆ:
ವಿವಾಹದ ಹಿಂದಿನ ದಿನ ವರನನ್ನು
ಮಾತಾ ಪಿತೃಗಳೊಂದಿಗೆ ಸಾಂಪ್ರದಾಯಿಕ, ಗೌರವ ಆದರಗಳೊಂದಿಗೆ ಸ್ವಾಗತಿಸಿ
ಉಪಚರಿಸುವುದು.
ಆವಾಹನೆ ಸಂಕಲ್ಪ:
ಪುರೋಹಿತರು ಮದುವೆಯ ಆಚರಣೆಯನ್ನು ಪ್ರಾರಂಭಿಸಲು
ಪೂರ್ವಭಾವಿಯಾಗಿ ದೇವತೆಗಳನ್ನು ಆಹ್ವಾನಿಸಿ, ಆಶಿರ್ವಾದಗಳನ್ನು ಅಪೇಕ್ಷಿಸಿ ಪ್ರಚೋದಿಸುವುದು.
·
ಗಣಪತಿ ವಂದನೆ: ಮದುವೆ ಕಾರ್ಯಗಳು ಸುಸೂತ್ರವಾಗಿ,
ವಿಘ್ನಗಳು ಬಾರದಂತೆ ಸುಸಂಪನ್ನಗೊಳ್ಳಲು ಗಣಪತಿಯ
ಆವಾಹನೆ ಮತ್ತು ಪೂಜೆ.
·
ನವಗ್ರಹಗಳ ಪೂಜೆ:
ಮನುಷ್ಯನ ಆಜೀವ ಪರ್ಯಂತ ಜೀವನಗತಿಯಲ್ಲಿ
ಪ್ರಭಾವ ಬೀರುವ ನವಗ್ರಹಗಳ ಮೊರೆಯಿಡುವುದು.
ಪೂಜ್ಯ ಭಾವದಿಂದ ಪ್ರಕೃತಿಯನ್ನು ಪೋಜಿಸುವುದು.
·
ಪುಣ್ಯಾಹವಾಚನ: ಪುರೋಹಿತರು, ಈ ದಿನ ಮಂಗಳಮಯವಾಗಿರಲಿ,
ಸಂಸ್ಕಾರ ವಿಧಿಗಳು ಶುಭವಾಗಿ, ಉತ್ತಮಗೊಳ್ಳಲೆಂದು
ಹಾರೈಸುವುದು.
·
ಸಂಕಲ್ಪ: ವಿವಾಹದ ನಡಾವಳಿಗಳು ಹಿಂದೂ
ಪಂಚಾಗ ರೀತ್ಯಾ ನಡೆಸಲಾಗುತ್ತದೆಂದು ನಿಶ್ಚಯಿಸುವುದು.
ನಾಂದಿ - ದೇವತಾರಾಧನೆ:
ಸುದೀರ್ಘ ಅಭ್ಯುದಯ ಜೀವನಕ್ಕಾಗಿ ಪಿತೃದೇವತೆಗಳ
ಆಶೀರ್ವಾದವನ್ನು ಬೇಡುವುದು.
ಉಪನಯನ:
'ಉಪ' ಅಂದರೆ ಹೆಚ್ಚುವರಿ, 'ನಯನ'
ಅಂದರೆ ಕಣ್ಣು. ವಿಧ್ಯಾರ್ಥಿ, ಬೌಧ್ಧಿಕ
ಜ್ಞಾನ ಎಂಬ ಅಪಾರ ಕಣ್ಣನ್ನು
ನೀಡುವ ಗುರುವಿನ ಬಳಿ ಶಿಕ್ಷಣಾರ್ಥಿಯಾಗಿ ಬರುವುದು. ವಿದ್ಯೆಯ ಪ್ರಾರಂಭಕ್ಕೆ ಬ್ರಹ್ಮೋಪದೇಶ
ನೀಡುವುದು. ಗಾಯತ್ರೀ ಮಂತ್ರ ಬೋಧಿಸುವುದು.
ಬ್ರಹ್ಮ ವೇದ ಹಾಗು ಗಾಯತ್ರಿ
ಮಂತ್ರವನ್ನು ಪ್ರತಿನಿಧಿಸುತ್ತಾನೆ. ಗಾಯತ್ರೀ ಮಂತ್ರವನ್ನು ಅನನುಭವಿಗೆ
ಬೋಧಿಸಲ್ಪಡುತ್ತದೆ. ಯಜ್ಞೋಪವೀತ ಎಂಬ ಎಳೆಯ
ಗಂಟು ಹಾಕಿದ ಪವಿತ್ರ ದಾರವನ್ನು
ವಿದ್ಯಾರ್ಥಿಗೆ ಧಾರಣ ಮಾಡಿಸಲಾಗುತ್ತದೆ. ಶ್ರೇಷ್ಠ
ಗಾಯತ್ರೀ ಮಂತ್ರವನ್ನು ಕಿವಿಯಲ್ಲಿ ಬೊಧಿಸಲಾಗುತ್ತದೆ.
ಕಾಶೀ ಯಾತ್ರೆ:
ವಿದ್ಯಾರ್ಜನೆಯ ನಂತರ ಸ್ನಾತಕನು ಕಠಿಣ
ಬ್ರಹ್ಮಚರ್ಯ ಹಾಗು ತಪಶ್ಚರ್ಯಗಳ ಅನುಷ್ಠಾನದಿಂದಾಗಿ
ಸಹಜ, ಸಾತ್ವಿಕ ಸ್ಥಿತಿಯಲ್ಲಿ ಇರುವುದರಿಂದ
ಸನ್ಯಾಸದ ಕಡೆ ಸೆಳೆಯಲ್ಪಟ್ಟು ಕಾಶೀಗೆ
ಹೊರಡುತ್ತಾನೆ. ದಾರಿ ಮಧ್ಯದಲ್ಲಿ ವಧುವಿನ
ತಂದೆ ಸಂದರ್ಶಿಸಿ
ಗೌರವದಿಂದ ಪಾದ ಪೂಜೆ ಮಾಡಿ
ವೈವಾಹಿಕ ಜೀವನದ ಶ್ರೇಷ್ಠತೆಯನ್ನು ಮನದಟ್ಟು
ಮಾಡಿಕೊಟ್ಟು ಜೀವನದ ಸವಾಲುಗಳನ್ನು ಎದುರಿಸಲು
ಸಂಗಾತಿಯಾಗಿ, ವಿವಾಹಕ್ಕೆ ಯೋಗ್ಯಳಾದ ತನ್ನ ಪುತ್ರಿಯನ್ನು ಮದುವೆ
ಮಾಡಿಕೊಡುವುದಾಗಿ, ನಂತರ ಯಾತ್ರೆಯನ್ನು ಮುಂದುವರೆಸುವಂತೆ
ಕೇಳಿಕೊಳ್ಳುತ್ತಾನೆ. ಅಂತೆಯೇ ಒಪ್ಪಿದ ವರನು
ಹಿಂದಿರುಗಿ ಬರುತ್ತಾನೆ. ಮದುಮಗನ ಪೋಷಾಕಿನಲ್ಲಿ ಹೂವಿನ
ಹಾರವನ್ನು ಅಲಂಕರಿಸಿ ಮಾತಾ ಪಿತೃಗಳ ಸಮೇತ
ಮಂಟಪದ ಪೀಠಗಳಲ್ಲಿ ಆಸೀನನಾಗುತ್ತಾನೆ. ದ್ವಿತೀಯ ಯಜ್ಞೋಪವೀತವನ್ನು ವಿವಾಹಾರ್ಥವಾಗಿ
ಧಾರಣೆ ಮಾಡಲಾಗುತ್ತದೆ. ಮುಂದಿನ ಹಂತದ ಜೀವನಕ್ಕೆ
ತಲುಪುವ ಮನೋಜ್ಞ ಸಾಂಪ್ರದಾಯಿಕ ವಿಧಿ
ಇದಾಗಿರುತ್ತದೆ.
ಗೌರೀ ಪೂಜೆ:
ವಧುವು ತಾಯಿಯ ಸಹಕಾರದಿಂದ ಪುರೋಹಿತರ
ಸಲಹೆಯಂತೆ ಸುದೀರ್ಘ ಸುಮಂಗಲಿ ಜೀವನಕ್ಕಾಗಿ
ಗೌರೀ ಪೂಜೆಯನ್ನ್ಯ್ ಮಾಡಿ ಪ್ರಾರ್ಥಿಸುತ್ತಾಳೆ.
ವಾಗ್ದಾನ ನಿಶ್ಚಯ:
ಮೊದಲು ಕನ್ಯೆಯ ತಂದೆ ಮಗಳನ್ನು,
ಮದುವೆ ಮಾಡಿಕೊಡುವ ನಿರ್ಧಾರವನ್ನು ಪ್ರಕಟಿಸುತ್ತಾನೆ. ನಂತರ ವರನ ತಂದೆಯು
ಆ ಮಾತನ್ನು ಸ್ವೀಕರಿಸಿ
ತನ್ನ ಒಪ್ಪಿಗೆಯನ್ನು ನಿಶ್ಚಯಗೋಳಿಸುತ್ತಾನೆ. ಇದು ನಿಶ್ಚಿತ, ಮದುವೆ
ಪ್ರಕಟಣೆ - ಪ್ರತಿಜ್ಞಾ ವಿಧಿ.
ನಿರೀಕ್ಷಣೆ - ಅಂತರಪಟ:
ಮದುಮಗನು ಮದುಮಗಳನ್ನು ನೋಡಲು ಕಾತರದಿಂದ ಕಾಯುತ್ತಿರುತ್ತಾನೆ.
ಪರಸ್ಪರರ ನಡುವೆ ಪರದೆಯನ್ನು ಹಿಡಿಯಲಾಗುವುದು.
ಮದುಮಗಳನ್ನು ಕರೆತರಲಾಗುವುದು. ಎದುರು-ಬದುರಾಗಿ ನಿಲ್ಲಿಸಲಾಗುವುದು.
ಮುಹೂರ್ತ ಪ್ರಾರಂಭ:
ಕಲಸಿದ ಜೀರಿಗೆ ಬೆಲ್ಲವನ್ನು ವಧು
ವರರು ಪರಸ್ಪರ ತಲೆಯ ಮೇಲೆ
ಎರೆಯಲು ಸೂಚಿಸಲಾಗುತ್ತದೆ. ಇದು ದಂಪತಿಗಳ ಮುರಿಯಲಾಗದ
ಮತ್ತು ಬೇರ್ಪಡಿಸಲಾಗದ ಸಂಬಂಧಸೂಚಕ. ಈ ವಿಧಿ ವಿವಾಹ
ಮುಹೂರ್ತದ ಪ್ರಾರಂಭ. ಪುರೋಹಿತರು ಮುಹೂರ್ತ ಪ್ರಾರಂಭ ಸೂಚಕ
ಮಂತ್ರಗಳನ್ನು ಪಠಿಸುತ್ತಾರೆ. ಒಬ್ಬರನ್ನೊಬ್ಬರು ಒಪ್ಪಿರುವ ಸಂಕೇತವಾಗಿ ಪರಸ್ಪರ ಹೂಮಾಲೆಗಳನ್ನು ೩
ಸಲ ವಿನಿಮಯ ಮಾಡಿಕೊಳ್ಳುತ್ತಾರೆ. ೨೨
ವಿಧಿಗೆ ಸೋದರ ಮಾವಂದಿರು ಸಹಕರಿಸುತ್ತಾರೆ.
ಅಂತರಪಟವನ್ನು ನಂತರ
ಮದುಮಕ್ಕಳು ಒಬ್ಬರನ್ನೊಬ್ಬರು ಮೊದಲ ಬಾರಿಗೆ ನೊದುತ್ತಾರೆ.
ಪಾಣಿಗ್ರಹಣ ಸಂಕಲ್ಪ:
ವಧುವಿನ ತಂದೆ ವರನ ತಂದೆಗೆ
ತಮ್ಮ ಗೋತ್ರದ ಪ್ರಮುಖರ ಮೂರು
ಪೀಳಿಗೆಯ ಹೆಸರುಗಳನ್ನು ಪ್ರಕಟಿಸಿ ಕನ್ಯಾದಾನ ಪ್ರತಿಗ್ರಹ ಪ್ರತಿಜ್ಞೆ ಮಾದುತ್ತಾನೆ. ಅಂತೆಯೇ ವರನ ಕಡೆಗೂ
ಗೋತ್ರ ಪ್ರವರಗಳು ನದೆಯುತ್ತವೆ.
ಮಧುಪರ್ಕ:
ಕನ್ಯೆಯ ತಂದೆ ವರನಿಗೆ ಹಾಲು,
ಮೊಸರು, ಜೇನುತುಪ್ಪ ಮಿಶ್ರಿತ ಮಧುಪರ್ಕವನ್ನು ಕೊಟ್ಟು
ಉಪಚರಿಸುತ್ತಾನೆ. ವಧು ವರರನ್ನು ಲಕ್ಷ್ಮೀನಾರಾಯಣ
ಸ್ವರೂಪವೆಂದು ಭಾವಿಸಿ ವಿಧಿ ವಿಧಾನಗಳನ್ನು
ಮುನ್ದುವರೆಸಲಾಗುತ್ತದೆ.
ಕನ್ಯಾದಾನ:
ವಿವಾಹದ ಬಹು ಪ್ರಾಶಸ್ತ್ಯದ ಸಂದರ್ಭ.
ವಧು ನಾರೀಕೆಳ ಫಲ ಸಾಹಿತ
ತನ್ನ ಬಲಗೈಯನ್ನು ವರನ ಬಲಗೈಯಲ್ಲಿರಿಸಿ, ವಧುವಿನ
ತಾಯಿ ಕಲಶೊಧಕವನ್ನು ಪ್ರೋಕ್ಷಿಸಿದ ನಂತರ ವಧುವಿನ ತಾಯಿ
ತಂದೆಯರು ತುಳಸಿ ದಳ ಮತ್ತು
ಬಂಗಾರವನ್ನಿರಿಸಿ ಮೂರು ಸಲ ಹಾಲನ್ನು
ಧಾರೆ ಎರೆಯುತ್ತರೆ. ಇದು ಕನ್ಯಾದಾನದ ಸಂಕೆತ.
ತೆಂಗಿನಕಾಯಿ ಪರಮೇಶ್ವರನ ಸ್ವರೋಪ. ಅಂತೆಯೇ ಪರಮೇಶ್ವರನ
ಸಾನಿಧ್ಯದ ಸಾಕ್ಷಿ ಎಂದು ಭಾವಿಸಲಾಗುತ್ತದೆ.
ವಧುವಿನ ತವರಿನ ಸಂಬಂಧಿಕರೂ ಸಹ
ಧಾರೆ ಎರೆಯಬಹುದಾಗಿದೆ. ವರನು ವಧುವಿನ ಕೈ
ಹಿಡಿದು ಮೂರು ಸಲ ಈ
ರೀತಿ ಶಪಥ ಮಾದುತ್ತಾನೆ. "ಧರ್ಮೇಚ,
ಅರ್ಥೆಚ, ಕಾಮೇಚ, ನಾತಿಚರಾಮಿ", ವಧುವೂ
ಸಹ ಇದನ್ನು ಪುನರುಚ್ಚರಿಸುತ್ತಾಳೆ. ಅಂದರೆ
- ಧಾರ್ಮಿಕ ವ್ಯವಹಾರದಲ್ಲಿ, ಆಕಾಂಕ್ಷೆಗಳ ಪೂರೈಕೆಯಲ್ಲಿ ಅತಿಕ್ರಮಿಸದೆ ಪರಸ್ಪರ ಸಮಾಲೋಚನೆ ಮಾಡಿ
ಪ್ರವ್ರುತ್ತರಾಗುತ್ತೇವೆ ಎಂಬ ಭಾವ.
ರಕ್ಷಾ ಬಂಧನ:
ವಧು ವರರು ಪರಸ್ಪರ ದುಷ್ಟ
ಶಕ್ತಿಗಳಿಂದ ರಕ್ಷಿಸಲ್ಪಡುವ ರಕ್ಷಾ ಬಂಧನವನ್ನು ಕೈಗೆ
ಕತ್ತಿಕೊಲ್ಲುತ್ತಾರೆ.
ಅಗ್ನಿ ಪ್ರತಿಷ್ಠಾಪನೆ:
ಸುಮಂಗಲಿಯರಿಂದ ಬೆಂಕಿಯನ್ನು ಪ್ರಜ್ವಲಿಸಿ ಅಗ್ನಿ ಕುಂಡದಲ್ಲಿ ಪ್ರತಿಷ್ಠಾಪಿಸಿ
ಪ್ರಚೊದಿಸಲಾಗುತ್ತದೆ. ಮತ್ತು ನಿರ್ವಿಘ್ನಕ್ಕಾಗಿ ಪೂಜಿಸಲ್ಪಡುತ್ತದೆ.
ಮಾಂಗಲ್ಯ ಧಾರಣೆ:
ಅರಿಶಿನ ಮಿಶ್ರಿತ ದಾರದಲ್ಲಿ ಪೋಣಿಸಿದ
ಕರಿಮಣಿ ಮತ್ತು ಚಿನ್ನದ ಮಾಂಗಲ್ಯವನ್ನು,
ಅಕ್ಷತೆ ಮತ್ತು ನಾರಿಕೇಳ ಫಲ,
ವಿಳ್ಯೇದೆಲೆ, ಇಟ್ಟಿರುವ ತಟ್ಟೆಯಲ್ಲಿಟ್ಟು, ಪೂಜಿಸಿದ ನಂತರ, ಕನ್ಯಾ
ಪಿತೃ ಸಭಾಸದರಿಗೆ ತೋರಿಸಿ ಆಶೀರ್ವಾದದ ಅಪ್ಪಣೆ
ಮಾದುತ್ತಾನೆ. ಉಚ್ಛ ಸ್ವರದಲ್ಲಿ "ಮಾಂಗಲ್ಯಂ
ತಂತು ನಾನೇನ.........." ಎಂದು ಪ್ರಾರಂಭವಾಗುವ ಮತ್ರಪಠಣೆ,
ಗಟ್ಟಿಮೇಳ ಧ್ವನಿಸುತ್ತಿರುವಾಗ ವರನು ವಧುವಿನ ಕಂಠಕ್ಕೆ
ಧಾರಣೆ ಮಾಡುತ್ತಾ ಈ ರೀತಿ, "ನನಗೆ
ದೀರ್ಘಾಯುಷ್ಯವನ್ನು ನೀಡುವಂತೆಯೂ, ಎಲೈ ಸೌಭಾಗ್ಯವತಿಯೇ ನೂರು
ವರ್ಷಗಳ ಕಾಲ ಸುಮಂಗಲಿಯಾಗಿ ಜೀವನವನ್ನು
ಪೂರೈಸುವ ಕೃಪೆ ದಯಪಾಲಿಸಲಿ"
ಎಂದು ಪ್ರಾರ್ಥಿಸುತ್ತಾನೆ. ನೆರೆದಿರುವ ಹಿರಿಯರೆಲ್ಲರೂ ಅಕ್ಷತೆಯ ರೂಪದಲ್ಲಿ ವದು-ವರರನ್ನು ಆಶೀರ್ವದಿಸುತ್ತಾರೆ.
ಅಕ್ಷತಾರೋಪಣೆ:
ವಧು-ವರರು ಪರಸ್ಪರ ಅಕ್ಷತಾರೋಪಣೆಯನ್ನು
ಮಾಡಿಕೊಳ್ಳುತ್ತಾರೆ. ಇದರೊಂದಿಗೆ ೫ ಬಣ್ಣಗಳು ಮಿಶ್ರಣ
ಮಾಡಿದ ಅಕ್ಕಿಯನ್ನು, ಬಿಡಿ ಹೂ ಪಕಳೆಯನ್ನು,
ಬಳಸಲಾಗುತ್ತದೆ.
ಪಾಣಿ ಗ್ರಹಣ:
ವರನು ತನ್ನ ಬಲಗೈಯಿಂದ ವಧುವಿನ
ಬಲಗೈ ಹಿಡಿದು ಹಸ್ತಲಾಘವ ಮಾಡುತ್ತ
ಗೃಹಸ್ಥ ಜೀವನವನ್ನು ನಡೆಸಲು ದೈವಕೃಪೆಯಿಂದ ನಿನ್ನನ್ನು
ನನಗೆ ಕೊಡಲಾಗಿದೆ. ಧೈರ್ಯಶಾಲಿಗಳು ಸದ್ಗುಣ ಸಂಪನ್ನ ಸಂತಾನ
ಹೊಂದಿ, ನೂರ್ಕಾಲ ಗೃಹಸ್ಥ ಜೀವನವನ್ನು
ಮುಂದುವರಿಸೋಣ, ಎಂದು ಹೇಳುತ್ತಾನೆ.
ಸಪ್ತಪದಿ - ಏಳು ಹೆಜ್ಜೆಗಳು:
ಇದು ಬಹಳ ಪ್ರಮುಖ ವಿಧಿ.
ವರನು ವಧುವಿನ ಕೈ ಹಿಡಿದು
ಮಂತ್ರಾಜ್ಞೆಯ ಉತ್ತರ ದಿಕ್ಕಿನಲ್ಲಿ ನಡೆದು
ಇಬ್ಬರೂ ಏಳು ಹೆಜ್ಜೆಗಳನ್ನು ಇದುತ್ತಾರೆ.
ವರನು "ನಾವು ಶಪಥ ಮಾಡುವ
ಈ ಏಳು ಹೆಜ್ಜೆಗಳ
ಅನುಷ್ಠಾನಕ್ಕೆ ದೇವತೆಗಳು ಶಕ್ತಿಯನ್ನು ಪ್ರಾಧಾನಿಸಿ ಆಶೀರ್ವದಿಸಲಿ" ಎಂದು ಪ್ರಾರ್ಥಿಸುತ್ತಾ ಈ
ರೀತಿ ಹೇಳುತ್ತಾನೆ.
·
೧ ನೇ ಹೆಜ್ಜೆ
: ಮನೆಯ ಒಡತಿಯಾಗಿ ಕುಟುಂಬದವರ ಯೋಗಕ್ಷೇಮವನ್ನು ವಹಿಸಿಕೊಳ್ಳಲು ದೇವರು ಶಕ್ತಿಕೊಡಲಿ.
·
೨ ನೇ ಹೆಜ್ಜೆ:
ಬದುಕಿನ ಅಗತ್ಯತೆಗಳನ್ನು ಪಡೆದು ಪರಿವಾರದ ಅಭ್ಯುದಯವಾಗಿ
ಶಾಂತಿ ಸೌಹಾರ್ದತೆ ನೆಲೆಸಲಿ.
·
೩ ನೇ ಹೆಜ್ಜೆ:
ಆಚಾರ, ವ್ಯವಹಾರ ವಿಚಾರದಲ್ಲಿ, ಧಾರ್ಮಿಕ
ಮಾರ್ಗದಲ್ಲಿ ಪರಸ್ಪರ ಮರ್ಗದರ್ಶನವಿರಲಿ.
·
೪ ನೇ ಹೆಜ್ಜೆ:
ಉದ್ದೇಶಗಳ ಸಾಧನೆ, ಸುಖ ಸಂತೋಷಗಳನ್ನು
ಪಡೆಯಲು ಕುಟುಂಬವನ್ನು ಸನ್ಮಾರ್ಗದಲ್ಲಿ ನಡೆಸೋಣ.
·
೫ ನೇ ಹೆಜ್ಜೆ:
ಐಶ್ವರ್ಯಾಭಿವೃದ್ಧಿ ಮತ್ತು ಪಶು ಸಂಪತ್ತನ್ನು
ಹೆಚ್ಚಿಸೋಣ.
·
೬ ನೇ ಹೆಜ್ಜೆ:
ಪರಸ್ಪರ ಸಮಾಲೋಚನೆಯಿಂದ ದೈಹಿಕ ಶಕ್ತಿ ಮತ್ತು
ಭೌತಿಕ ಶಕ್ತಿಯನ್ನು ಪಡೆಯೋಣ. ಪ್ರಾಕೃತಿಕ ಋತುಮಾನಗಳಿಂದ
ಬೆಳವಣಿಗೆಯನ್ನು ಪ್ರಾರ್ಥಿಸೋಣ.
·
೭ ನೇ ಹೆಜ್ಜೆ:
ಯಜ್ಞ ಸಮೃದ್ಧಿಯನ್ನು, ಬಯಸುತ್ತಾ ಅಜೀವ ಪರ್ಯಂತ ಅತ್ಯುತ್ತಮ
ಸ್ನೇಹ ಸಂಗಾತಿ, ದಂಪತಿಗಳಾಗಿ ಬಾಳೋಣ.
ಸಪ್ತಪದಿ ಮುಗಿಸುತ್ತಾ, ಪತಿ ತನ್ನ ಸತಿಯನ್ನು ಕೇಳುತ್ತಾನೆ,
"ಎಲೈ ಆತ್ಮೀಯ ಗೆಳತಿ ಕೌಟುಂಬಿಕ
ಜೀವನ ಧರ್ಮ, ಕಾನೂನು ನಿರತ
ಈ ತತ್ವಗಳಿಗೆ ಬದ್ಧರಾಗಿರೋಣ. ಮನಸ್ಸಿನ
ಒಂದೇ ಅಭಿರುಚಿ, ಅವಿಚ್ಛಿನ ಸಂಬಂಧವನ್ನು ಹೊಂದಿ, ಪ್ರೀತಿ ಆಹಾರ,
ಶಕ್ತಿ, ಸುಖ, ದುಃಖಗಳನ್ನು, ಸಮನಾಗಿ
ಹಂಚಿಕೊಂಡು, ಬಾಳಿನ ಉದ್ದಕ್ಕೂ ಮತ್ತು
ಎಂದೆಂದಿಗೂ ಮುಂದಿನ ಜನ್ಮಗಳಲ್ಲಿಯೂ ಒಂದಾಗಿ
ಬದುಕೋಣ". ಮುಂದುವರಿಯುತ್ತಾ ಹೇಳುತ್ತಾನೆ. " ನಾನು ಆಕಾಶ, ನೀನು
ಭೂಮಿ. ನಾನು ಶಕ್ತಿ ಕೊಡುವೆ,
ನೀನದನ್ನು ಪಡೆವೆ. ಚಿಂತನೆ ನನ್ನದು
ಅಭಿವ್ಯಕ್ತಿ ನಿನ್ನದು. ಗಾನ ನನ್ನದು ನಿನ್ನದು.
ಏಳು ಸುಶೀಲೆ, ನಮ್ಮ ಮನೆಯನ್ನು
ಬೆಳಗು, ಮಾದರಿ ಜೀವನವನ್ನು ನಡೆಸೋಣ.
ಪ್ರಧಾನ ಹೋಮಗಳು:
ಪೂರ್ವಭಾವಿಯಾಗಿ ಪ್ರತಿಷ್ಠಾಪಿಸಲ್ಪಟ್ಟ ಅಗ್ನಿ ಕುಂಡದಲ್ಲಿ ತುಪ್ಪ,
ಬತ್ತದ ಹರಳು ಮತ್ತು ಇತರೆ
ಏಳು ಪವಿತ್ರ ಮರಗಳ ಕಡ್ಡಿಯನ್ನು
ಅಂದರೆ ಅಶ್ವತ್ಥ, ಬಿಲ್ವ, ದೇವದಾರು, ಖದಿರ,
ಚಂದನ, ನ್ಯಾಗ್ರೋಧ, ಫಲಾಸ ಎಂಬ ಸಮಿತ್ತುಗಳನ್ನು
ವಿವಿಧ ದೇವತೆಗಳಿಗೆ ಸಂಭೋದಿಸಿ ವೇದ ಮಂತ್ರೋಚ್ಛಾರಣೆಗಳೊಂದಿಗೆ ಅಗ್ನಿಗೆ ಸಮರ್ಪಿಸಲಾಗುತ್ತದೆ. ಉಂಟಾದ
ಧೂಮವು ಔಷಧಯುಕ್ತ ಮತ್ತು ಗುಣಾತ್ಮಕ, ದೇಹ
ಮತ್ತು ವಾತಾವರಣವನ್ನು ಪರಿಶುದ್ಧಗೊಳಿಸುವ ಅತ್ಯಂತ ಸಮರ್ಥ ಶಕ್ತಿಯುಳ್ಳ
"ಅಗ್ನಿ ಸಾಕ್ಷಿ"ಯ ವಿವಾಹವೆಂದು ತಿಳಿಯಲಾಗಿದೆ.
ಆಸ್ಮಾರೋಹಣ:
ದಂಪತಿಗಳು ಮೂರು ಸಲ ಅಗ್ನಿ
ಪ್ರದಕ್ಷಿಣೆ ಮಾಡುವರು. ಇದನ್ನು ಅಗ್ನಿ ಪರಿನಯನ
ಎಂದು ಹೆಸರಿಸಲಾಗಿದೆ. ವಧುವನ್ನು ಶಿಲಾಪೀಠದ ಮೇಲೆ ಇರಿಸಿ ವರನು
ವಧುವಿಗೆ ಕಾಲುಂಗುರವನ್ನು ತೊಡಿಸುತ್ತಾನೆ. ಶಿಲೆ ಆಕೆಯ ಹೆಜ್ಜೆಯ
ಸ್ಥಿರತೆಯ ಸಂಕೆತ. ಕಾಲುಂಗುರ ಗೃಹಸ್ಥಾಶ್ರಮ
ಪ್ರವೇಶಿಸಿದ ಸಂಕೇತ. ಗೃಹಸ್ಥ ಜೀವನವು
ಯಾವುದೇ ಕಷ್ಟ ಕಾರ್ಪಣ್ಯಗಳ ಪರೀಕ್ಷೆಯಲ್ಲಿ
ದೃತಿಗೆಡದೆ ನಿಭಾಯಿಸಲಿ ಎಂಬುದನ್ನು ಸೂಚಿಸುವ ವಿಧಿ.
ಲಾಜಾ ಹೋಮ:
ವಧುವಿನ ಸಹೋದರರಲ್ಲಿ ಒಬ್ಬರು ವಧುವಿನ ಬೊಗಸೆಯಲ್ಲಿ
ಭತ್ತದ ಹರಳು, ತುಪ್ಪ ಮತ್ತು
ಸಮಿ ಪತ್ರೆಗಳೊಂದಿಗೆ ನೀಡುತ್ತಾನೆ. ಮಂತ್ರಪಠಣದೊಂದಿಗೆ ವಧು ಅಗ್ನಿಗೆ ಅರ್ಪಿಸುತ್ತಾಳೆ.
ಪತಿಗೆ ದೀರ್ಘಾಯಸ್ಸು ಮತ್ತು ಕುಟುಂಬಕ್ಕೆ ಸುಖ
ಸಂತೋಷಗಳನ್ನು ಪ್ರಾರ್ಥಿಸುತ್ತಾಳೆ. ಈ ರೀತಿ ಮೂರು
ಲಾಜಾ ಹೋಮಗಳನ್ನು ನೆರವೇರಿಸಲಾಗುತ್ತದೆ.
ಇದಾದ ನಂತರ ದಂಪತಿಗಳು ವಿವಿಧ
ದೇವತೆಗಳು, ಅಗತ್ಯಕ್ಕೆ ತಕ್ಕ ಆಶೀರ್ವಾದಗಳನ್ನು, ದಯಪಾಲಿಸಿದ್ದಕ್ಕಾಗಿ
ಕೃತಜ್ಞತಾಪೂರ್ವಕ ಜಯಾದಿ ಹೋಮಗಳನ್ನು ನೆರವೇರಿಸುತ್ತಾರೆ.
ಧ್ರುವ ಮತ್ತು ಅರುಂಧತಿ ನಕ್ಷತ್ರ ದರ್ಶನ:
ವಧು-ವರರು ಧ್ರುವತಾರೆಯನ್ನು (ಧ್ರುವ
ಲೋಕ) ದಿಟ್ಟಿಸಿ ನೋಡುತ್ತಾರೆ ಮತ್ತು ವಿವಾಹ ಬಂಧನದಲ್ಲಿ
ಸ್ಥಿರತೆ ಇರಬೇಕೆಂದು ಧ್ಯಾನಿಸುತ್ತಾರೆ. ಪ್ರತಿರಾತ್ರಿ ಇತರ ನಕ್ಷತ್ರಗಳು ಸುತ್ತುತ್ತಿದ್ದರೂ,
ಧ್ರುವ ನಕ್ಷತ್ರವು ಸದಾ ಸ್ಥಿರವಾಗಿರುತ್ತದೆ. ಅದೇ
ರೀತಿ ಜೀವನದಲ್ಲಿ ನಿರಂತರ ಬದಲಾವಣೆಗಳಿದ್ದರೂ ವಧು ವರರ ಸಂಬಂಧವು ಧ್ರುವ ನಕ್ಷತ್ರದಂತೆ ಸ್ಥಿರವಾಗಿರುತ್ತದೆ
ಎಂದು ಭಾವ.
ಗೃಹಸ್ಥಾಶ್ರಮ ಪ್ರವೇಶಿಸಿದ ನಂತರ
ದಂಪತಿಗಳು ಪ್ರಥಮ ಭೋಜನವನ್ನು ಪರಸ್ಪರ ಸಿಹಿ ತಿನ್ನಿಸಿ ಸವಿಯುತ್ತಾರೆ. ಸತಿಯು ಪತಿಯ ಕೈ ಹಿಡಿದು
ಗಂಡನ ಮನೆಯ ತನ್ನ ಪ್ರಥಮ ಪ್ರವೇಶವು ಕುಟುಂಬಕ್ಕೆ ಸುಖ ಸಂತೋಷಗಳು ಉಂಟಾಗಲಿ ಎಂದು ದೇವರಿಗೆ ಮೊರೆ
ಇದುವುದರೊಂದಿಗೆ ವಿವಾಹ ವಿಧಿಗಳು ಸಂಪನ್ನಗೊಳ್ಳುತ್ತವೆ.
ಇಷ್ಟೆಲ್ಲಾ ಅರ್ಥಪೂರ್ಣ ವಿಧಿ ವಿಧಾನದಿಂದ ಮಾಡಿದಂತಹ
ವಿವಾಹದ ಮಹತ್ವ ಈಗಿನ ಜನರಲ್ಲಿ
ಎಷ್ಟಿದೆ ಅನ್ನುವುದು ತಿಳಿಯಲಾಗುತ್ತಿಲ್ಲ. ಮಾಡಿದಂತಹ ಸುಮಾರು ೧೦೦ ಮದುವೆಗಳಲ್ಲಿ
೫೦ ಜೋಡಿಗಳು ಬೇರ್ಪಡುತ್ತಾರೆ. ಬೇರ್ಪಡಿಕೆ
ಅನ್ನುವುದು ಸಹ ತರಹಾವರಿಯಾಗಿದೆ ಒಂದೊಂದು
ಕಡೆ ವಿಚ್ಚೆದನೆಯಾದರೆ ಮತ್ತೊಂದೆಡೆ ಗಂಡನೋ ಅಥವಾ ಹೆಂಡತಿಯೋ
ಸಾವಿಗೆ ಮೊರೆ ಹೊಗುತ್ತಿದ್ದಾರೆ.
ಜೀವನ ಅನ್ನುವಂತಹ ದಾರಿಯಲ್ಲಿ ಜೊತೆಯಾಗಿ ಕಷ್ಟ-ಸುಖದಲ್ಲಿ ಸಮನಾಗಿ ಭಾಗಿಯಾಗಿ, ಬರುವಂತಹ
ಒಗ್ಗಟ್ಟಿನಿಂದ ತಮ್ಮ ಸಂಸಾರ ನಡೆಸುವುದು
ಈಗಿನ ಕಾಲದಲ್ಲಿ ಕಷ್ಟ ಏತಕ್ಕಾಗಿ ಅನ್ನುವ
ಪ್ರಶ್ನೆಗೆ ಉತ್ತರ ಹುಡುಕುವುದು ನಮ್ಮೆಲ್ಲರ
ಜವಾಬ್ದಾರಿಯಲ್ಲವೇ???