೨೦೨೪ ಜನವರಿ ೨೨ ... ಇದು ಇಡೀ ಭಾರತಕ್ಕೆ ಅತಿ ದೊಡ್ಡ ಹಬ್ಬದ ದಿನ. ಎಲ್ಲರಿಗೂ ತಿಳಿದಿರುವಂತೆ ಅಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತದೆ.
ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಹಬ್ಬಕ್ಕೊಂದು ನನ್ನ ಅಳಿಲ ಸೇವೆಯೆಂದು ಮಂತ್ರಾಕ್ಷತಾ ಅಭಿಯಾನದಲ್ಲಿ ನಾನು ಕೂಡ ತೊಡಗಿಸಿಕೊಂಡಿದ್ದೇನೆ. ಹಿಂದೂಸ್ಥಾನದ ಪ್ರತಿಯೊಂದು ಮನೆ ಮನೆಗೂ ಶ್ರೀ ರಾಮನ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯಕ್ರಮಕ್ಕೆ ನನ್ನದೊಂದು ಅತೀ ಸಣ್ಣ ಸೇವೆ.
ಈ ಸೇವೆ ಮಾಡುತ್ತಲಿರುವಾಗ ಒಂದೊಂದು ಮನೆಯಲ್ಲಿಯೂ ಒಂದೊಂದು ರೀತಿಯ ರೋಮಾಂಚನಕಾರಿ ಅನುಭವ. ನಿನ್ನೆ ನನಗೆ ಒಬ್ಬರ ಮನೆಯಲ್ಲಿ ಆದ ಆ ಒಂದು ಅನುಭವ ನನ್ನ ಮನಸ್ಸಿನಲ್ಲಿ ಹಾಗೇ ಉಳಿದುಕೊಂಡು ಬಿಟ್ಟಿದೆ.
ಸುಮಾರು ೮೦ರ ಆಸುಪಾಸಿನ ವಯೋವೃದ್ಧರ ಆ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದೆ. ಅವರು ಬಾಗಿಲು ತೆಗೆದ ಕೂಡಲೇ ಪ್ರತಿಯೊಂದು ಮನೆಯಲ್ಲೂ ಹೇಳುವ ಹಾಗೆ "ನಮಸ್ತೆ ಸರ್, ನಾನು RSS ನಿಂದ ಬಂದಿದ್ದೇನೆ. ಅಯೋಧ್ಯಾ ಶ್ರೀ ರಾಮನ ಮಂತ್ರಾಕ್ಷತೆಯನ್ನು ನಿಮಗೆ ತಲುಪಿಸಿ ಹೋಗುವ ಅಂತ ನಿಮ್ಮ ಮನೆಗೆ ಬಂದಿದ್ದೇನೆ" ಎಂದು ಇಷ್ಟು ಹೇಳುತ್ತಾ ಇದ್ದ ಹಾಗೆಯೇ. ಆ ವಯೋ ವೃದ್ಧರು ನನ್ನ ಮಾತುಗಳನ್ನು ತಡೆದರು. ಒಂದೇ ಒಂದು ನಿಮಿಷ ತಡೆಯಿರಿ ಎಂದು ಹೇಳಿ ಅವರ ಮನೆಯಾಕೆಯನ್ನು ಕರೆದರು. ಅವರ ಮಡದಿ ಸೀದಾ ತಮ್ಮ ಮನೆಯ ದೇವರ ಕೋಣೆಗೆ ಹೋಗಿ ಬೆಳ್ಳಿ ತಟ್ಟೆಯಲ್ಲಿ ತುಪ್ಪದ ದೀಪಗಳನ್ನು ಹಚ್ಚಿಕೊಂಡು ಬಂದು ನಮಗೆ ಆರತಿ ಬೆಳಗಿ. ಮನೆಯ ಹೊಸ್ತಿಲಿಗೆ ಹಾನ ಬಳಗಿ ನಮ್ಮನ್ನು ಅವರ ಮನೆಯ ಒಳಗೆ ಕರೆದುಕೊಂಡರು.
ಅವರು ನಮಗೆ ಆರತಿ ಬೆಳಗುತ್ತಿದ್ದ ಹಾಗೆ ನನ್ನ ಮನಸ್ಸಿನಲ್ಲಿ ಏನೋ ಒಂದು ರೀತಿಯ ಸಂಚಲನ. ವಿವರಿಸಲಿಕ್ಕೆ ಆಗದಂತಹ ಮನೋಸ್ಥಿತಿ ನನ್ನದಾಗಿತ್ತು. ನನಗೇ ತಿಳಿಯದಂತೆ ನನ್ನ ಕಣ್ಣಿನಲ್ಲಿ ಕಣ್ಣೀರು ಇಳಿಯಲಾರಂಭಿಸಿತು.
ಮನೆಯ ಒಳಗೆ ನಮ್ಮನ್ನು ಬರಮಾಡಿಕೊಂಡು ನಂತರ ಶ್ರೀ ರಾಮನ ಮಂತ್ರಾಕ್ಷತೆಯನ್ನು ನನ್ನ ಕೈಯಲ್ಲೆ ಅವರ ಮನೆಯ ದೇವರ ಕೋಣೆಯಲ್ಲಿ ಇರಿಸಿದರು. ತದನಂತರ ನನ್ನೊಡನೆ ಹೋದ ಎಲ್ಲಾ ಕಾರ್ಯಕರ್ತರನ್ನು ಮನೆಯ ಒಳಗೆ ಕರೆಸಿಕೊಂಡು ಎಲ್ಲರಿಗೂ ಬಾಳೆಹಣ್ಣು ಹಾಗೂ ಕುಡಿಯಲು ನೀರನ್ನು ನೀಡಿ ಒಂದು ವಿಚಾರ ತಿಳಿಸಿದರು. ರಾಮ ಮಂದಿರದ ತೀರ್ಪು ಬಂದ ದಿನದಿಂದಲೇ ಇವರ ಮನೆಯಲ್ಲಿ ಹಬ್ಬ ಶುರುವಾಗಿ ಹೋಗಿದೆ. ಶ್ರೀ ಮದ್ವಾಲ್ಮೀಕಿ ರಾಮಾಯಣ, ಶ್ರೀ ರಾಮ ಚರಿತ ಮಾನಸ ಹಾಗೂ ಶ್ರೀಮೂಲರಾಮನ ಸತ್ಯ ನೆಲೆ ಅಷ್ಟೂ ಪುಸ್ತಕಗಳನ್ನು ಇವರ ಮನೆಯಲ್ಲಿ ಇಟ್ಟು ಅದರ ಹಿಂದೆ ಶ್ರೀ ರಾಮನ ಭಾವಚಿತ್ರವನ್ನು ಇಟ್ಟು ತೀರ್ಪು ಬಂದ ದಿನದಿಂದಲೂ ಇವರು ಪ್ರತಿ ದಿನವೂ ತುಪ್ಪದ ದೀಪವನ್ನು ಹಚ್ಚುತ್ತಾ ಬಂದಿದ್ದಾರಂತೆ.
ಶ್ರೀ ರಾಮನ ಮಂತ್ರಾಕ್ಷತೆಯನ್ನು ಅವರಿಗೆ ತಲುಪಿಸಿದ ನಮ್ಮನ್ನು ಅವರು ರಾಮನ ಬಂಟರು ಎಂದು ಕರೆದರು. ಆ ಮಾತುಗಳು ಈಗಲೂ ಸಹ ನನ್ನ ಮನಸ್ಸಿನಲ್ಲಿ ಹಾಗೆಯೇ ಉಳಿದುಹೋಗಿದೆ.
ಇಂತಹ ಎಷ್ಟೋ ಮನೆಗಳಲ್ಲಿ, ಎಷ್ಟೋ ಮನಗಳಲ್ಲಿ ಶ್ರೀ ರಾಮ ನೆಲೆಸಿದ್ದಾನೆ. ಆತನ ಮಂತ್ರಾಕ್ಷತೆಯನ್ನು ತಲುಪಿಸುವ ಕೆಲಸ ನನಗೆ ಸಿಕ್ಕಿದ್ದು ನನ್ನ ಯಾವುದೋ ಜನ್ಮದ ಪುಣ್ಯ ಎಂದೇ ಭಾವಿಸುತ್ತೇನೆ.
ಧನ್ಯೋಸ್ಮಿ.
ಈ ಹಬ್ಬ ಬರೆಯ ರಾಮನ ಹಬ್ಬವಲ್ಲ ರಾಷ್ಟ್ರದ ಹಬ್ಬವಾಗಲಿ ಎಂದು ಆಶಿಸುತ್ತಾ...
ಜೈ ಶ್ರೀ ರಾಮ್ 🚩🚩🚩

No comments:
Post a Comment